ದೂರಮಾಪನ -
ಮಾಪನೋಪಕರಣದ ಓದಿಕೆಯನ್ನು ಯಾ ದಾಖಲೆಯನ್ನು ದೂರದಿಂದ ಸೂಚಿಸುವ ಅಥವಾ ದಾಖಲಿಸುವ ವಿಧಾನ (ಟೆಲಿಮೀಟರಿಂಗ್). ವೈದ್ಯುತ ಎಂಜಿನಿಯರಿಂಗಿನಲ್ಲಿ ದೂರಮಾಪನವನ್ನು ಸಾಧಾರಣವಾಗಿ ಸಾಮಥ್ರ್ಯ ಮಾಪನಗಳಲ್ಲಿ (ಪವರ್ ಮೆಶರ್‍ಮೆಂಟ್ಸ್)) ಅವಲಂಬಿಸುವರು. ಇದರಿಂದ ದೂರ ದೂರದ ಹಲವಾರು ಠಾಣೆಗಳಲ್ಲಿನ ಸಾಮಥ್ರ್ಯ ಹೊರೆಗಳು (ಪವರ್ ಲೋಡ್ಸ್) ಕೇಂದ್ರೀಯ ಬಿಂದುವೊಂದರಲ್ಲಿ ತಿಳಿಯುತ್ತವೆ.; ಬಹುತೇಕ ಒಂಟಿ ಮಾಪಕವೊಂದರಲ್ಲಿಯೇ ಸಮಗ್ರ ಸಾಮಥ್ರ್ಯವನ್ನೂ ಅರಿಯಬಹುದು. ವಾಸ್ತವವಾಗಿ, ಅಳೆಯಲಾದ ಯಾವುದೇ ವೈದ್ಯುತ್ ರಾಶಿಯನ್ನು (ಎಲೆಕ್ಟ್ರಿಕಲ್ ಕ್ವಾಂಟಿಟಿ) ಇತರ ಅನೇಕ ಪರಿಮಾಣುಗಳ ಭಾರೀ ಸಮುದಾಯ, ಮಟ್ಟಗಳು, ಸಂಮರ್ದಗಳು, ಸ್ಥಾನಗಳು ಇತ್ಯಾದಿಗಳೊಡನೆ ಈ ತೆರನಾಗಿ ಪ್ರೇಷಿಸಬಹುದು. ವೈದ್ಯುತ ರಾಶಿಗಳಿಗಾಗಿ ಇರುವ ವ್ಯವಸ್ಥೆಗಳ ವಿಶಾಲ ವರ್ಗೀಕರಣವೆಂದರೆ ಪ್ರವಾಹ, ವೋಲ್ಟೇಜ್, ಆವರ್ತಾಂಕ (ಫ್ರೀಕ್ವೆನ್ಸಿ), ಸ್ಥಾನ ಮತ್ತು ಆವೇಗ (ಇಂಪಲ್ಸ್).

     ಆಕಾಶಯಾನದಲ್ಲಿ ಸಹಸ್ರಾರು ಕಿಲೊಮಿಟರುಗಳಷ್ಟು ದೂರದಿಂದ ಅಳೆಯುವುದೇ ಆಗಲಿ ನ್ಯೂಕ್ಲಿಯರ್ ರಿಯಾಕ್ಟರಿನ ತಿರುಳಿನೊಳಗಣ ಅಭಿಕ್ರಿಯಾ ಶೀಲತೆಯಲ್ಲಿನಂತೆ (ರಿಆ್ಯಕ್ಟಿವಿಟಿ) ಕೇವಲ ಕೆಲವು ಮೀಟರುಗಳಷ್ಟು ದೂರದಿಂದ ಅಳೆಯುವುದೇ ಆಗಲಿ ಇವೆಲ್ಲ ವಿಧದವನ್ನೂ ದೂರಮಾಪನ ಒಳಗೊಂಡದೆ. ದೂರಮಾಪನ ಅಂತಿಮವಾಗಿ ಅಳೆತೆಯೇ ಆದರೂ ಇದರಲ್ಲಿ ಎರಡು ನಿರ್ದಿಷ್ಟ ಲಕ್ಷಣಗಳುಂಟು.  ಒಂದನೆಯದು, ದೂರಮಾಪನ ಕೊನೆಯಲ್ಲಿರುವ ಉಪಕರಣಗಳು ಮಾಪಿತದಿಂದ (ಅಂದರೆ ಮಾಪನಕ್ಕೆ ಒಳಪಟ್ಟ ರಾಶಿ) ಸಾಕಷ್ಟು ದೂರದಲ್ಲಿ ಇರುತ್ತದೆ. ವಾಸ್ತವ ದೂರ ಎಷ್ಟೆಂಬುದು ಇಲ್ಲಿ ಮುಖ್ಯ ಅಲ್ಲ.  ಎರಡನೆಯದು, ಮಾಪಿತವನ್ನು ವೈದ್ಯುತ ಸ್ವಭಾವದ ರಾಶಿಯಾಗಿ ಮಾರ್ಪಡಿಸಲಾಗುವುದು. ಇದು ಸುಲಭ ಪ್ರೇಷಣಕ್ಕೆ ಅನುಕೂಲವಾಗಿದೆ. ಮಾಪಿತಕ್ಕಿಂತ ಬೇರೆ ಬಗೆಯಾಗಿರುವ ಈ ರಾಶಿಗೆ ಅನುವಾದಕ ಸಾಧನವೆಂದು ಹೆಸರು. ಇದು ಆವರ್ತಾಂಕದಂತೆ (ಫ್ರೀಕ್ವೆನ್ಸಿ) ಕ್ರಿಯಾತ್ಮಕ ರಾಶಿ (ಫಂಕ್ಷನಲ್ ಕ್ವಾಂಟಿಟಿ) ಆಗಿರಬಹುದು. ಸಾರ್ವತ್ರಿಕ ದೂರಮಾಪನ ವ್ಯವಸ್ಥೆಯ ವಿಶ್ಲೇಷಣೆಯನ್ನು ಚಿತ್ರದಲ್ಲಿ ಕಾಣಿಸಿದೆ.

	ದೂರಮಾಪನ ವ್ಯವಸ್ಥೆಯ ಪ್ರಾಥಮಿಕ ಸಂಸೂಚಕ (ಪ್ರೈಮರಿ ಡಿಟೆಕ್ಟರ್) ಮತ್ತು ಅಂತಿಮ ಸಾಧನ ಯಾವುದೇ ಸಾರ್ವತ್ರಿಕ ಮಾಪನ ವ್ಯವಸ್ಥೆಯಲ್ಲಿನಂತೆ ಅವೇ ಕ್ರಿಯಾತ್ಮಕ ಸ್ಥಾನಗಳಲ್ಲಿ ನೆಲೆಸಿರುತ್ತವೆ. ಆದರೆ ಮಧ್ಯವರ್ತೀ ಸಾಧನಗಳಲ್ಲಿ ಇರುವ ಮೂರು ವ್ಯವಸ್ಥಾ ಧಾತುಗಳು ದೂರಮಾಪನ ವ್ಯವಸ್ಥೆಗೆ ಮಾತ್ರ ವಿಶಿಷ್ಟವಾದವು; ದೂರಮಾಪಕ ಪ್ರೇಷಕ, ದೂರಪಾಪಕ ನಾಲೆ, ದೂರಮಾಪಕ ಅಭಿಗ್ರಾಹಕ. ಪ್ರಾಥಮಿಕ ಸಂಸೂಚಕದ ನಿರ್ಗಮವನ್ನು (ಔಟ್‍ಪುಟ್), ದೂರ ಮಾಪಕ ನಾಲೆಯ ಮೇಲೆ ಪ್ರೇಷಣೆ ಮಾಡಲು ಅನುಕೂಲವಾಗುವಂತೆ, ಏಕೈಕವಾಗಿ ಸಂಬಂಧಿತವಾದ ಒಂದು ರಾಶಿಗೆ (ಅನುವಾದಕ ಸಾಧನ) ಮಾರ್ಪಡಿಸುವುದು ದೂರಮಾಪಕ ಪ್ರೇಷಕದ ಕ್ರಿಯೆ. ಅಂತಿಮ ಉಪಕರಣವನ್ನು ಪರಿಕರ್ಮಿಸಬಲ್ಲ ಏಕೈಕವಾಗಿ ಸಂಬಂಧಿತವಾದ ಒಂದು ರಾಶಿಗೆ ಅನುವಾದಕ ಸಾಧನವನ್ನು ಮಾರ್ಪಡಿಸುವುದು ಸುದೂರ ನೆಲೆಯಲ್ಲಿರುವ ದೂರಮಾಪಕ ಅಭಿಗ್ರಾಹಕದ ಕ್ರಿಯೆ. ದೂರಮಾಪಿಸುವ ನಾಲೆಯಲ್ಲಿ ಸಂಯೋಜಿಸುವ ಒಂದು ಕೊಂಡಿಯೂ ಅದರ ಸಹವರ್ತಿ ಅಂತಿಮ ಸಲಕರಣೆಗಳೂ ಇವೆ. ದೂರಮಾಪನ ವ್ಯವಸ್ಥೆಯೊಂದರಲ್ಲಿ ಈ ಮೇಲಿನ ವ್ಯವಸ್ಥಾ ಧಾತುಗಳ ಪೈಕಿ ಪ್ರತಿಯೊಂದೂ ಪ್ರತ್ಯೇಕ ಧಾತುಗಳಾಗಿ ಇರಲೇಬೇಕೆಂಬುದೇನೂ ಇಲ್ಲ. ಉದಾಹರಣೆಗೆ, ಪ್ರಾಥಮಿಕ ಸಂಸೂಚಕವೊಂದರ ನಿರ್ಗಮ ದೂರಮಾಪಕ ನಾಲೆಯ ಮೇಲೆ ಪ್ರೇಷಣೆಗೆ ಸಮರ್ಪಕವಾಗಿದ್ದರೆ ಆಗ ದೂರಮಾಪಕ ಪ್ರೇಷಕ (ಟ್ರಾನ್ಸ್‍ಮಿಟರ್) ಅನಗತ್ಯ. ಅಲ್ಲದೆ, ನಾಲೆಯ ಮೇಲೆ ಪ್ರೇಷಿಸಲಾದ ರಾಶಿ ಕೊನೆ ಉಪಕರಣವನ್ನು ನೇರವಾಗಿ ಪರಿಕರ್ಮಿಸಬಲ್ಲುದಾದರೆ ಆಗ ದೂರಮಾಪಕ ಅಭಿಗ್ರಾಹಕ (ರಿಸೀವರ್) ಅವಶ್ಯವಾಗುವುದಿಲ್ಲ.

	ಪ್ರೇಷಣ ಮಾಧ್ಯಮದ ಅನುಸಾರ ದೂರಮಾಪನ ವ್ಯವಸ್ಥೆಗಳನ್ನು ಸುಕರವಾಗಿ ವರ್ಗೀಕರಿಸಲಾಗಿದೆ. ಮಾಹಿತಿಯನ್ನು ವಿವಿಧ ರೂಪಗಳಲ್ಲಿ ಪ್ರೇಷಿಸಬಹುದಾದರೂ ಬಹುಪಾಲು ವ್ಯವಸ್ಥೆಗಳು ಮೂರು ವರ್ಗಗಳಲ್ಲಿ ಅಳವಡುತ್ತವೆ. ಯಾಂತ್ರಿಕ (ಮೆಕ್ಯಾನಿಕಲ್), ವೈದ್ಯುತ (ಎಲೆಕ್ಟ್ರಿಕಲ್) ಮತ್ತು ರೇಡಿಯೊ ದೂರಮಾಪನ.

	ಯಾಂತ್ರಿಕ ದೂರಮಾಪನ: ಅಳತೆಮಾಡುವ ಬಿಂದುಗಳಿಗೂ ದತ್ತಾಂಶಗಳನ್ನು ಉಪಯೋಗಿಸಿಕೊಳ್ಳುವ ಬಿಂದುಗಳಿಗೂ ನಡುವೆ ಯಾಂತ್ರಿಕ ಯುಗ್ಮನಗಳನ್ನು (ಮೆಕ್ಯಾನಿಕಲ್ ಕಪ್ಲಿಂಗ್) ಒಳಗೊಂಡ ಯಾಂತ್ರಿಕ ದೂರಮಾಪನವನ್ನು ಸಾಧಾರಣವಾಗಿ ಅಲ್ಪದೂರಗಳಲ್ಲಿ ಮಾತ್ರ ಬಳಸುತ್ತಾರೆ. ಕಾರಣ, ಯಾಂತ್ರಿಕ ಮಾಧ್ಯಮಗಳಲ್ಲಿ ಕ್ಷೀಣನದ (ಅಟೆನ್ಯುಯೇಷನ್) ಉಚ್ಚಮಟ್ಟ, ಸಂಚರಣದ (ಪ್ರೋಪಗೇಷನ್) ನಿಮ್ನವೇಗ, ದಕ್ಷ ಹಾಗೂ ಸರಳ ಯಾಂತ್ರಿಕ ಪ್ರವರ್ಧಕಗಳ (ಆ್ಯಂಪ್ಲಿಫೈಯರ್ಸ್) ರಚನೆಯಲ್ಲಿರುವ ಕಷ್ಟ ಮತ್ತು ಪ್ರೇಷಣೆಯ ಹಾದಿ ಉದ್ದಕ್ಕೂ ಅವಿಚ್ಛಿನ್ನ ಯಾಂತ್ರಿಕ ಯುಗ್ಮನ ಮಾಧ್ಯಮದ ಆವಶ್ಯಕತೆ ತಲೆದೋರುತ್ತವೆ. ಕೆಲವೇ ಅಡಿಗಳಿಗಿಂತ ಹೆಚ್ಚು ದೂರಗಳಲ್ಲಿ ದೂರಮಾಪನ ಮಾಡಬೇಕಾದಾಗ ದಂಡಗಳ ಹಾಗೂ ಗಿಯರ್ ಸಾಲುಗಳ ನೆರವಿನಿಂದ ನೇರ ಯಾಂತ್ರಿಕಕೊಂಡಿಸೇರಿಕೆಗಳನ್ನು (ಲಿಂಕೇಜಸ್) ಉಪಯೋಗಿಸುವುದುಂಟು. ಕೈಗಾರಿಕಾ ಪ್ರಕ್ರಿಯೆಗಳ ನಿಯಂತ್ರಣದಲ್ಲಿ ನೂರಾರು ಅಡಿಗಳಿಗಿಂತಲೂ ಹೆಚ್ಚು ದೂರ ದೂರಮಾಪನ ಮಾಡಲು ತರಲ ಯುಗ್ಮನ (ಫ್ಲೂಯಿಡ್ ಕಪ್ಲಿಂಗ್-ಅದು ಚರದ್ರವಾತ್ಮಕ ಆಗಬಹುದು ಅಥವಾ ವಾಯ್ವಾತ್ಮಕ ಆಗಬಹುದು) ಬಳಸುತ್ತಾರೆ.

	ವೈದ್ಯುತ ದೂರಮಾಪನ: ತಂತಿ ಜೋಡಿಸಿದ ದೂರಮಾಪನ ವ್ಯವಸ್ಥೆಗಳಿವು. ಇವು ರೇಡಿಯೊ ದೂರಮಾಪನಕ್ಕಿಂತ ಬೇರೆಯಾದವು ಎಂದು ವ್ಯಕ್ತಪಡಿಸಲು. ವೈದ್ಯುತ ದೂರಮಾಪನದ ವಿದ್ಯುನ್ಮಂಡಲದಲ್ಲಿ ವೋಲ್ಟೇಜ್ ಯಾ ಪ್ರವಾಹವನ್ನು ಹೆಚ್ಚು ಕಡಿಮೆ ಮಾಡುವುದರಿಂದ, ಅಂದರೆ ಅದರಲ್ಲಿ ವಿಚರಣೆಗಳನ್ನು (ವೇರಿಯೇಷನ್ಸ್) ಉಂಟುಮಾಡುವುದರಿಂದ, ಮಾಹಿತಿಯನ್ನು ಪ್ರೇಷಿಸಲಾಗುತ್ತದೆ.

	ಪ್ರವಾಹ ವ್ಯವಸ್ಥೆಯಲ್ಲಿ ಪ್ರಾಥಮಿಕ ಅಳೆವ ಘಟಕದ ಚಲನೆ ವ್ಯವಸ್ಥೆಗೆ ಲಗತ್ತಿಸಿದ ನಿಯಂತ್ರಣ ವಿಭಾಗದಲ್ಲಿ ಒಂದು ಪ್ರವಾಹವನ್ನು ಬೇಡುತ್ತದೆ. ಇದು ಮಾಪಿತ ಉತ್ಪಾದಿಸುವ ಭ್ರಾಮಕತ್ವವನ್ನು (ಟಾರ್ಕ್) ಸಂತುಲಿಸಲು (ಬ್ಯಾಲೆನ್ಸ್) ಅಗತ್ಯ. ಪ್ರೇಷಿಸುವ ಮಂಡಲಕ್ಕೆ ಈ ಸಂತುಲಿಸುವ ಪ್ರವಾಹವನ್ನು ಸೂಚನೆ ಮತ್ತು ದಾಖಲೆಗಳಿಗಾಗಿ ರವಾನಿಸಲಾಗುತ್ತದೆ. ಹಲವಾರು ಆಕರಗಳಿಂದ ಬರುವ ಇಂಥ ಪ್ರವಾಹಗಳನ್ನು ಸರ್ವಸಾಮಾನ್ಯವಾದ ಒಂದು ಸೂಚಕದಲ್ಲಿ (ಇಂಡಿಕೇಟರ್) ಕೂಡಿಸುವುದರ ಮೂಲಕ ಸಂಕಲನ ಸಾಧ್ಯವಾಗುವುದು. ಪ್ರೇಷಕದಿಂದ ಅಭಿಗ್ರಾಹಕದ ದೂರ 50 ಮೈಲುಗಳ ತನಕವೂ ಇರಬಹುದು.

	ವೋಲ್ಟೇಜ್ ವ್ಯವಸ್ಥೆಯಲ್ಲಿ, ಇದೀಗ ವಿವರಿಸಿದ ರೀತಿ ನಿಯಂತ್ರಣ ವಿಭಾಗ ವೋಲ್ಟ್ ಮಾಪಕದ ಮೂಲಕ ವೋಲ್ಟೇಜ್ ಸಂತುಲನವನ್ನು ಸಾಧಿಸಬಹುದು; ಅಥವಾ ಮಾಪಿತದಿಂದ ಕಾಸಲ್ಪಟ್ಟ ಉಷ್ಣತಾಂತರ ಯುಗ್ಮಗಳಿಂದ (ಥರ್ಮೊಕಪಲ್ಸ್) ವೋಲ್ಟೇಜನ್ನು ಉತ್ಪಾದಿಸಬಹುದು; ಅಥವಾ ಮೇಲೆ ವಿವರಿಸಿದ ರೀತಿ ಪ್ರವಾಹ-ಭ್ರಾಮಕತ್ವ ಸಂತುಲನದ ಫಲಿತಾಂಶವಾಗಿ ಆಂತರಿಕ ರೋಧ ಕುಸಿತದಲ್ಲಿ ಆಗುವಂತೆ ಉಂಟುಮಾಡಬಹುದು; ಅಥವಾ ಮಾಪಿತಕ್ಕೆ ಅನುಪಾತೀಯವಾದ ಜವದಿಂದ ಚಾಲೂ ಮಾಡಲ್ಪಟ್ಟ ಒಂದು ವಿದ್ಯುಜ್ಜನಕ ವಿದ್ಯುಚ್ಚಾಲಕ ಬಲವನ್ನು (ಎಲೆಕ್ಟ್ರೊಮೋಟಿವ್ ಫೋರ್ಸ್) ಉತ್ಪಾದಿಸುತ್ತದೆ. ಈ ವೋಲ್ಟೇಜುಗಳ ಉತ್ಪಾದನೆ ಹೇಗೆಯೇ ಆಗಲಿ ಅವನ್ನು ಬಲು ದೂರದಲ್ಲಿ ಸ್ವಯಂಚಾಲಿತ ಸ್ವಸಂತುಲನಕಾರೀ ವಿಭವಮಾಪಕಗಳು (ಆಟೊಮ್ಯಾಟಿಕ್ ಸೆಲ್ಫ ಬ್ಯಾಲೆನ್ಸಿಂಗ್ ಪೊಟೆನ್ಯಿಯೊಮೀಟರ್ಸ್) ಸುಕರವಾಗಿ ದಾಖಲಿಸುತ್ತವೆ.

	ಪ್ರಾಥಮಿಕ ಘಟಕ ರೇಡಿಯೊ-ಆವರ್ತಾಂಕವೊಂದರಲ್ಲಿ ಸಾಂದ್ರಕಾರಿಯನ್ನು (ಕಂಡೆನ್ಸರ್) ಚಲಿಸುವಂತೆ ಮಾಡಿ ಅಥವಾ ಪರ್ಯಾಯಕವೊಂದನ್ನು (ಆಲ್ಟರ್ನೇಟರ್) ಚಾಲೂ ಮಾಡುವ ಚಿಕ್ಕ ಒಂದು ನೇರ ಪ್ರವಾಹ ಮೋಟರಿನ ಜವವನ್ನು ವ್ಯತ್ಯಸಿಸುವಂತೆ ಮಾಡಿ ದೂರಮಾಪನೋದ್ದೇಶಗಳಿಗಾಗಿ ಚರಾವರ್ತಾಂಕವೊಂದನ್ನು (ವೇರಿಯೆಬಲ್ ಫ್ರೀಕ್ವೆನ್ಸಿ) ಉತ್ಪಾದಿಸಬಹುದು.

	ಸ್ಥಾನ ಸಮುದಾಯದಲ್ಲಿ (ಪೊಸಿಷನ್ ಗ್ರೂಪ್) ಪ್ರಾಥಮಿಕ ಘಟಕದ ಚಲನೆಯನ್ನು ಅಥವಾ ಪ್ರಾಥಮಿಕ ಘಟಕದಿಂದ ಸರಿಸಲ್ಪಡುವ ಯಾ ನಿಯಂತ್ರಿಸಲ್ಪಡುವ ಒಂದು ಚಾಲಕದ (ಪೈಲಟ್) ಚಲನೆಯನ್ನು ಸುದೂರದಲ್ಲಿ ದ್ವಿಪ್ರತೀಕರಿಸಲಾಗುವುದು. ಈ ಚಾಲಕ ರೋಧವನ್ನು (ರೆಸಿಸ್ಟೆನ್ಸ್) ಯಾ ಪ್ರತಿಘಾತವನ್ನು (ರಿಆ್ಯಕ್ಟೆನ್ಸ್) ಸಂತುಲಿಸುವ ಸೇತು ಮಂಡಲ (ಬ್ರಿಜ್ ಸಕ್ರ್ಯೂಟ್) ಆಗಿರಬಹುದು, ಚರಾತ್ಮಕ ಅನ್ಯೋನ್ಯ ಪ್ರೇರಕತ್ವ (ವೇರಿಯೆಬಲ್ ಮ್ಯೂಚುಯಲ್ ಇಂಡಕ್ಟೆನ್ಸ್) ಆಗಿರಬಹುದು (ಪರಿವರ್ತಕಗಳು-ಟ್ರಾನ್ಸ್‍ಫಾರ್ಮರ್ಸ್) ಅಥವಾ ಒಂದು ಸೆಲ್ಸಿನ್ ಮೋಟರ್ ಆಗಿರಬಹುದು. [ಇದರಲ್ಲಿ ತ್ರಿಪ್ರಾವಸ್ಥೆಯ (ತ್ರೀ-ಫೇಸ್) ಸ್ಟ್ಯಾಟರಿನಲ್ಲಿ ರಾಟರಿನ ಸ್ಥಾನವನ್ನು (ಪ್ರಾವಸ್ಥೆ) ಅಭಿಗ್ರಹಿಸುವ ಕೊನೆಯಲ್ಲಿ ಪುನರುತ್ಪಾದಿಸಲಾಗುವುದು.] ಇಲ್ಲಿ ಸಾಧಾರಣವಾಗಿ ಕೇವಲ ಕೆಲವೇ ಮೈಲುಗಳ ತನಕ ಮಾತ್ರ ಕಾರ್ಯ ನಿರ್ವಹಣೆ ಸೀಮಿತವಾಗಿರುವುದು.

	ಮಾಪಿತಗಳನ್ನು ಪ್ರೇಷಿಸುವ ಆವೇಗ ಬಗೆಯನ್ನು (ಇಂಪಲ್ಸ್ ಟೈಪ್) ಪ್ರತಿನಿಧಿಸುವಂಥ ಉಪಕರಣಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ದತ್ತ ಕಾಲದಲ್ಲಿ ಪ್ರೇಷಿತವಾದ ಆವೇಗಗಳ ಸಂಖ್ಯೆ ಮಾಪಿತಗಳ ಪರಿಮಾಣವನ್ನು (ಮ್ಯಾಗ್ನಿಟ್ಯೂಡ್) ಸೂಚಿಸಬಹುದು. ಕಚ್ಚು ಮಾಡುವ ಒಂದು ಸಲಕರಣೆಯಿಂದ ಇಲ್ಲವೇ ಒಂದು ಕ್ಲಚ್ಚಿನಿಂದ ಇವನ್ನು ಕೂಡಿಸುವುದು ಸಾಧ್ಯ. ಅಥವಾ ಆವೇಗದ ಅವಧಿ ಪ್ರಾಥಮಿಕ ಮಾಪಕದಿಂದ ನಿಯಂತ್ರಿತವಾಗಿರಬಹುದು ಮತ್ತು ಅದನ್ನು ಅಭಿಗ್ರಹಿಸುವ ಕೊನೆಯಲ್ಲಿ ಅರ್ಥವಿಸಬಹುದು ಅಥವಾ ಆವೇಗದ ಅವಧಿ ಪ್ರಾಥಮಿಕ ಮಾಪಕದಿಂದ ನಿಯಂತ್ರಿತವಾಗಿದ್ದು ಅಭಿಗ್ರಹಣ ಕೊನೆಯಲ್ಲಿ ಅರ್ಥವಿಸಲ್ಪಡಬಹುದು. ಆವೇಗಗಳನ್ನು ಉಚ್ಚಾವರ್ತಾಂಕದಲ್ಲಿ ಪ್ರೇಷಿಸಿದ್ದಾದರೆ ಪ್ರೇಷಣ ನಾಲೆಯಲ್ಲಿನ ಪ್ರೇರಕತ್ವ ಮತ್ತು ಸಂಧಾರಣ ಪರಿಣಾಮಗಳು (ಇಂಡಕ್ಟೆವ್ಸ್ ಅಂಡ್ ಕೆಪ್ಯಾಸಿಟಿ ಇಫೆಕ್ಟ್ಸ್) ತೃಪ್ತಿಕರ ಪ್ರೇಷಣದ ದೂರವನ್ನು ಸೀಮಿತಗೊಳಿಸುತ್ತವೆ. ನೇರ ಪ್ರವಾಹ ಆವೇಗಗಳನ್ನು ಉಪಯೋಗಿಸುವ ವ್ಯವಸ್ಥೆಗಳು 50ರಿಂದ 250 ಮೈಲುಗಳ ವ್ಯಾಪ್ತಿಗಿಂತಲೂ ಹೆಚ್ಚು ದೂರ ಕ್ರಿಯೆ ನಡೆಸುವುವು.

	ವೈದ್ಯುತ ದೂರಮಾಪನ ವ್ಯಾಪಕವಾಗಿ ಬಳಕೆಗೆ ಬಂದದ್ದು ಕಳೆದ ಶತಮಾನದ ಕೊನೆಯಲ್ಲಿ ಆ ವೇಳೆಗೆ ವಿದ್ಯುತ್ಸಾಮಥ್ರ್ಯ ವ್ಯವಸ್ಥೆಗಳೂ ರೇಲ್ವೇ ಮಾರ್ಗಗಳೂ ಹೆಚ್ಚಾದವು. ಇಂದು ವೈದ್ಯುತ ದೂರಮಾಪನವನ್ನು ಎಣ್ಣೆ ಕೊಳವೆ ಹಾದಿಗಳು, ರಾಸಾಯನಿಕ ಪ್ರಕ್ರಮ ಸ್ಥಾವರಗಳು ಮುಂತಾದ ವಿಭಿನ್ನ ವ್ಯವಸ್ಥೆಗಳಲ್ಲಿ ಕೂಡ ವಿಶಾಲವಾಗಿ ಬಳಸಲಾಗುತ್ತಿದೆ. ಆಧುನಿಕ ವಿತರಣ ವ್ಯವಸ್ಥೆಯಲ್ಲಿ ಹೊರೆಯನ್ನು ಕುರಿತ ದತ್ತಾಂಶಗಳನ್ನು ಸೂಕ್ತ ರೂಪಕ್ಕೆ ಮಾರ್ಪಡಿಸಿ ಕೇಂದ್ರೀಯ ನೆಲೆಯೊಂದಕ್ಕೆ ಪ್ರೇಷಿಸಿ ಅಲ್ಲಿ ಅವನ್ನು ಅಂಕಾತ್ಮಕ ಗಣಕ (ಡಿಜಿಟಲ್ ಕಂಪ್ಯೂಟರ್) ಪ್ರಕ್ರಮಿಸಲು ಅನುಕೂಲವಾಗುವ ರೂಪಕ್ಕೆ ಮಾರ್ಪಡಿಸಲಾಗುವುದು. ಇಡೀ ವ್ಯವಸ್ಥೆಯ ಮೇಲೆ ಗಣಕಕ್ಕೆ ಪ್ರಾಥಮಿಕ ನಿಯಂತ್ರಣ ಉಂಟು. ವಿದ್ಯುತ್ಸಾಮಥ್ರ್ಯ ವಿತರಣ ವ್ಯವಸ್ಥೆಗಳಲ್ಲಿ ವೈದ್ಯುತ ದೂರಮಾಪನದ ಅತ್ಯಂತ ಹಳೆಯ ಹಾಗೂ ವ್ಯಾಪಕವಾದ ಬಳಕೆ ಇದೆ: ಒಂದು ಕೇಂದ್ರೀಯ ನೆಲೆಯಲ್ಲಿ ಇಡೀ ವ್ಯವಸ್ಥೆಯನ್ನು ಕುರಿತಂತೆ ಹೊರೆಗಳ ವಿತರಣೆಯನ್ನು ಸೂಚಿಸಲಾಗುವುದು; ಇದರಿಂದಾಗಿ ವಿವಿಧ ನೆಲೆಗಳಲ್ಲಿರುವ ಬೇರೆ ಬೇರೆ ವಿದ್ಯುಜ್ಜನಕಗಳಿಗೆ ಹೊರೆಯನ್ನು ಅತ್ಯಂತ ಮಿತವ್ಯಯ ರೀತಿಯಲ್ಲಿ ಹಂಚಿ ಹಾಕಬಹುದು.

	ರೇಡಿಯೊ ದೂರಮಾಪನ : ಹವಾಧ್ಯಯನಕ್ಕಾಗಿ ಹಾರಿಸಿದ ಬಲೂನುಗಳಿಂದ ದತ್ತಾಂಶಗಳ ಸಂಗ್ರಹಣೆ ಮಾಡುವ ಹಾದಿಯಲ್ಲಿ ರೇಡಿಯೊ ದೂರಮಾಪನ ಜನಿಸಿತು (ಜರ್ಮನಿ, 1930). ಕ್ಷಿಪಣಿ (ಮಿಸ್ಸೈಲ್) ಎಂಜಿನಿಯರಿಂಗಿನಲ್ಲಿ ಇದರ ಪಾತ್ರ ಬಲು ಹಿರಿದು. ಕ್ಷಿಪಣಿ ಮತ್ತು ಆಕಾಶ ತಂತ್ರವಿದ್ಯೆಯ ಮೂಲಘಟಕವಿದು. ಮನುಷ್ಯರಹಿತ ಆಕಾಶನೌಕೆಯಿಂದ ಪರಿಸರದ ಪರಿಸ್ಥಿತಿಗಳನ್ನು (ಉಷ್ಣತೆ, ವಾಯುಸಾಂದ್ರತೆ, ವಿಕಿರಣ ಸಾಂದ್ರತೆ, ಸೂಕ್ಷ್ಮ ಉಲ್ಕಾ ಪಿಂಡಗಳ ಬಂಬಾಯಿಸಿಕೆ) ಹಾಗೂ ಸ್ವತಃ ನೌಕೆಯ ನಿರ್ವಹಣೆಯನ್ನು (ಶ್ರಮ, ಉಷ್ಣತೆ, ಕಂಪನ) ಕುರಿತ ದತ್ತಾಂಶಗಳನ್ನು ಪಡೆಯಲು ರೇಡಿಯೊ ದೂರಮಾಪನವನ್ನು ಉಪಯೋಗಿಸಲಾಗುತ್ತದೆ. ಈ ಅನ್ವಯದಲ್ಲಿ ಭಾಗವಹಿಸುವ ಒಂದು ಪ್ರರೂಪೀ ದೂರಮಾಪನ ವ್ಯವಸ್ಥೆ ಏಕಕಾಲದಲ್ಲಿ 30 ಯಾ ಹೆಚ್ಚು ಚರಗಳ ಮೇಲೆ ಮಾಹಿತಿಯನ್ನು ಪ್ರೇಷಿಸಬೇಕು, ಇದರಲ್ಲಿ ಬರುವ ದೋಷ ಸಂಭಾವ್ಯತೆ ತೀರ ಕಡಿಮೆ ಇರಬೇಕು. ಇದರ ಸಲಕರಣೆಗಳ ವಿಶ್ವಾಸಾರ್ಹತೆ ಉಚ್ಚ ಮಟ್ಟದ್ದಾಗಿರಬೇಕು ಮತ್ತು ಪ್ರೇಷಕ ಸಲಕರಣೆಗಳು ಆದಷ್ಟೂ ಸರಳ, ಅಡಕ, ಹಗುರ ಮತ್ತು ಅಗ್ಗ ಆಗಿರಬೇಕು.

	ಉಪಯೋಗಗಳು: ಉಕ್ಕಿನ ಕಾರ್ಖಾನೆಗಳು, ಅನಿಲೋತ್ಪಾದಕಗಳು, ಸಂಶ್ಲೇಷಿತ ರಬ್ಬರ್ ಸ್ಥಾವರಗಳು, ತೈಲಶುದ್ಧಿಕಾರಕಗಳು ಮತ್ತು ಅಮೂಲ್ಯ ವಿಲಾಯಕಗಳ (ಸಾಲ್ವೆಂಟ್ಸ್) ಮರುಗಳಿಕೆ ಅವಶ್ಯವಾಗುವ ಸ್ಥಾಪನೆಗಳು-ಮುಂತಾದ ವಿಭಿನ್ನ ಉದ್ಯಮಗಳಲ್ಲಿ ಇಂದು ವ್ಯಾಪಕವಾಗಿ ದೂರಮಾಪನ ತತ್ತ್ವಗಳನ್ನು ಬಳಸಲಾಗುತ್ತಿದೆ. ಜಲಮಂಡಲಿಗಳಲ್ಲಿ ಬಲುದೂರದಿಂದ ನೀರಿನ ಮಟ್ಟ ಮತ್ತು ಒತ್ತಡಗಳನ್ನು ತಿಳಿಯಲು ಮತ್ತು ಇಡೀ ಜಲವ್ಯವಸ್ಥೆಯಲ್ಲಿ ನೀರ ಹರಿವಿನ ವಿವರ ಪಡೆಯಲು ಇವನ್ನು ಅನ್ವಯಿಸುತ್ತಾರೆ. ಪ್ರವಾಹ, ಬಿರುಗಾಳಿ, ರೇವು ಮತ್ತು ಬಂದರುಗಳಲ್ಲಿ ಬಾಗಿಲುಗಳ ತೆರೆತ ಮತ್ತು ಮುಚ್ಚಿಕೆ-ಇವನ್ನು ಸೂಚಿಸಲು ದೂರಮಾಪನದ ಉಪಯೋಗವಿದೆ. ವ್ಯವಸ್ಥಾ ಹೊರೆಗಳನ್ನು ಸುದೂರ ಬಿಂದುವೊಂದರಲ್ಲಿ ಸಂಕಲಿಸುವುದು ಮೇಲು ವಿಚಾರಕ ನಿಯಂತ್ರಣ, ಟಪ್ಪೆ ಮಾಡುವುದು ಇವೇ ಮೊದಲಾದವು ಅದರ ಇತರ ಉಪಯೋಗಗಳು.
(ಎಚ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ